ನಾಯನಾರ್ -
	ತಮಿಳುನಾಡಿನ ಶೈವ ಸಂತರನ್ನು ಈ ಹೆಸರಿನಿಂದ ಕರೆಯಲಾಗುತ್ತಿದೆ. ಇವರು 4ನೆಯ ಶತಮಾನದಿಂದ 9ನೆಯ ಶತಮಾನದ ವರೆಗೆ ಬಾಳಿದವರು. ದಕ್ಷಿಣ ಭಾರತದಲ್ಲಿ ಶೈವಧರ್ಮ ಹರಡಲಿಕ್ಕೆ ಇವರೇ ಕಾರಣರೆನ್ನಲಾಗಿದೆ. ಇವರನ್ನು ತಮಿಳು ನಾಡಿನಾದ್ಯಂತ ಹಾಗೂ ದಕ್ಷಿಣಭಾರತದ ಹಲವು ಶಿವದೇವಾಲಯಗಳಲ್ಲಿ ಪೂಜಿಸಲಾಗುತ್ತಿದೆ. ಪರಮಪ್ರಭು ಎಂದರೆ ಪರಮಾತ್ಮ ಎಂಬ ಅರ್ಥ ಕೊಡುವ ಈ ನಾಯನಾರ್ ಎಂಬ ಮಾತನ್ನು ಪರಮಾತ್ಮನ ಪ್ರತಿ ಸ್ವರೂಪಿಗಳೆನಿಸಿದ ಈ ಭಕ್ತರಿಗೂ ಅನ್ವಯಿಸಲಾಗಿದೆ. ಇಂಥ ಅರವತ್ತಮೂರು ಪುರಾತನರ ಜೀವನಚರಿತ್ರೆ ತಮಿಳಿನ ಮಹಾಕಾವ್ಯಗಳಲ್ಲಿ ಒಂದಾದ ತಿರುತ್ತೊಂಡರ್ ಪುರಾಣಕ್ಕೂ ಹನ್ನೆರಡನೆಯ ಶತಮಾನದಲ್ಲಿ ಎರಡನೆಯ ಚೋಳ ಕುಲೋತ್ತುಂಗನ ಆಸ್ಥಾನಕವಿ ಹಾಗೂ ಸಚಿವನಾಗಿದ್ದ ಶೇಕ್ಕಿಳಾರ್ ರಚಿಸಿದ ಪೆರಿಯಪುರಾಣಕ್ಕೂ ವಸ್ತುವನ್ನು ಒದಗಿಸಿದೆ. ಈ ಮಹಾಕಾವ್ಯಕ್ಕೆ ಆಧಾರಗ್ರಂಥವೆಂದರೆ ಎಂಟನೆಯ ಶತಮಾನದಲ್ಲಿ ಜೀವಿಸಿದ್ದ ಈ ನಾಯನಾರುಗಳಲ್ಲಿ ಒಬ್ಬನಾದ ಸುಂದರಮೂರ್ತಿ ಉಳಿದ ಅರುವತ್ತೆರಡು ಮಂದಿ ನಾಯನಾರುಗಳನ್ನು ಏಳು ಮಂದಿ ಭಕ್ತರನ್ನೂ ಹನ್ನೊಂದು ಸೂಕ್ತಗಳಲ್ಲಿ ಸ್ತುತಿಸಿ, ತಿರುತ್ತೊಂಡತ್ತೊಗೈತ್ತಿರುಪ್ಪದಿಗಮ್ (ಭಗವಂತನ ಭಕ್ತರ ತಂಡವನ್ನು ಕುರಿತ ಪವಿತ್ರ ದಶಕ) ಎಂದು ಕರೆಯಲಾಗಿರುವ ಗ್ರಂಥವೊಂದನ್ನು ರಚಿಸಿದ್ದಾನೆ.  ಇದರಲ್ಲಿ ಸುಂದರಮೂರ್ತಿ ಉಳಿದ ಅರವತ್ತೆರಡು ಮಂದಿ ನಾಯನಾರುಗಳನ್ನೂ, ಏಳು ಮಂದಿ ಭಕ್ತರನ್ನು ಹನ್ನೊಂದು ಸೂಕ್ತಗಳಲ್ಲಿ ಸ್ತುತಿಸಿ, ತಿರುತ್ತೊಂಡತ್ತೊಗೈತಿರುಪ್ಪದಿಗಮ್ (ಭಗವಂತನ ಭಕ್ತರ ತಂಡವನ್ನು ಕುರಿತ ಪವಿತ್ರ ದಶಕ) ಎಂದು ಕರೆಯಲಾಗಿರುವ ಗ್ರಂಥವೊಂದನ್ನು ರಚಿಸಿದ್ದಾನೆ. ಇದರಲ್ಲಿ ಸುಂದರಮೂರ್ತಿಯೂ ಸೇರಿದಂತೆ ಅರುವತ್ತಮೂವರ ಚರಿತ್ರೆ ಇರುವುದಲ್ಲದೆ ಉಳಿದ ಏಳು ಜನ ಭಕ್ತರನ್ನು ಸೇವಕರು, ಗಾಯಕರು, ಚಿಂತನಶೀಲರು (ಅಥವಾ ಧ್ಯಾನಿಗಳು) ಹುಟ್ಟಿನಿಂದ ತಿರುವಾರೂರಿನ ನಿವಾಸಿಗಳು, ಶಿವನ ಆರಾಧಕರು, ವಿಭೂತಿಯನ್ನು ಲೇಪಿಸಿಕೊಂಡಿರುವ ಋಷಿಗಳು ಮತ್ತು ಇತರ ನಾಡುಗಳಲ್ಲಿರುವ ಭಕ್ತರು ಎಂದು ವರ್ಣಿಸಲಾಗಿದೆ. ಶಿವನನ್ನೂ, ಶಿವಭಕ್ತರನ್ನೂ ಸಂತೋಷಗೊಳಿಸಲು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಸೇವೆಯ ಬಾಳ್ವೆಯನ್ನು ನಡೆಸಿದ ಈ ಭಕ್ತರು ವಿಭಿನ್ನ ಜಾತಿಗಳಿಗೆ ಹಾಗೂ ಸಮಾಜದ ವಿವಿಧಸ್ತರಗಳಿಗೆ ಸೇರಿದವರು. ಇವರೆಲ್ಲಾ ಭಕ್ತಿಮಾರ್ಗದ ಗಟ್ಟಿ ನೆಲದಲ್ಲಿ ನಿಂತು ಬಾಳಿದವರು ಇತರರು ಮಾಡಲಾಗದ ಅಪೂರ್ವ ಕಾರ್ಯಗಳನ್ನು ಎಸಗಿದವರು. ಅಂಥವರಲ್ಲಿ ಕಣ್ಣಪ್ಪರ್, ಸಿರಿತ್ತೊಂಡರ್, ತಿರುನೀಲಕಂಠರ್ ಮುಂತಾದವರನ್ನು ಹೆಸರಿಸಬಹುದು. 

	ಜಂಗಮನೊಬ್ಬನಿಗೆ ಆರೋಗಣೆಯನ್ನು ಮಾಡಿಸಲು ಬತ್ತವನ್ನು ಕೊಳ್ಳುವುದಕ್ಕಾಗಿ ತನ್ನ ತಾಳಿಯನ್ನೂ ಬಿಚ್ಚಿಕೊಡುವುದರ ಮೂಲಕ ಅತಿಥಿ ಜಂಗಮನೊಬ್ಬನಿಗೆ ಮಾಂಸದ ಭಕ್ಷ್ಯವನ್ನು ತಯಾರಿಸುವುದಕ್ಕಾಗಿ ತನ್ನ ಪ್ರೀತಿಯ ಕಂದನನ್ನು ಬಲಿ ಕೊಡುವ ಮೂಲಕ, ನಾಗರಹಾವು ಕಚ್ಚಿ ಮಗ ಸತ್ತು ಬಿದ್ದಿದ್ದಾಗಲೂ ಪ್ರಸಿದ್ಧ ಸಂತ ಅಪ್ಪರ್ ಅವರಿಗೆ ಔತಣವನ್ನು ಏರ್ಪಡಿಸುವ ಮೂಲಕ, ಗಂಡನ ಅಣತಿಯಂತೆ ತನ್ನ ಪತಿಯನ್ನು ತ್ಯಜಿಸಿ ಭಕ್ತನೊಬ್ಬನೊಡನೆ ಆತನ ಪತ್ನಿಯಂತೆ ಬಾಳಲೂ ಸಿದ್ಧಳಾಗುವ ಮೂಲಕ ಈ ಸಂತರಲ್ಲಿ ಹಲವರ ಪತ್ನಿಯರು ತಮ್ಮ ಗಂಡಂದಿರ ಜಂಗಮಸೇವೆಯ ಕಾಯಕದಲ್ಲಿ ಬೆಂಬಲವಾಗಿ ನಿಲ್ಲುವುದನ್ನೂ ಕಾಣಬಹುದು.
(ನೋಡಿ- ಅರುವತ್ತಮೂರು-ಪುರಾತನರು)

	ತಂಜಾವೂರು ಜಿಲ್ಲೆಯ ಧಾರಾಸುರಮ್‍ನಲ್ಲಿರುವ ರಾಜರಾಜೇಶ್ವರಿ ದೇವಾಲಯದಲ್ಲಿನ ಗೋಡೆಗಳ ಮೇಲೆ ಈ ಸಂತರ ಜೀವನವನ್ನು ಚಿತ್ರಿಸುವ ಕೆತ್ತನೆಗಳಿವೆ. ಅಲ್ಲದೆ ಕರ್ನಾಟಕದಲ್ಲಿ ನಂಜನಗೂಡು, ಚಾಮರಾಜನಗರ ಈ ಶಿವಾಲಯಗಳಲ್ಲಿ ಈ ಸಂತರ ಶಿಲ್ಪಾಕೃತಿಗಳನ್ನು ಕಾಣಬಹುದು. ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮಾಡಿಸಿದ ಈ ಸಂತರ ಶಿಲಾಪ್ರತಿಮೆಗಳಲ್ಲದೆ ದಳವಾಯಿ ನಂಜರಾಜಯ್ಯ ಮಾಡಿಸಿಕೊಟ್ಟ ಕಂಚಿನ ಪ್ರತಿಮೆಗಳನ್ನೂ ಕಾಣಬಹುದು.

	ಕನ್ನಡದಲ್ಲಿ ಈ ಸಂತರನ್ನು ಕುರಿತು ಹಂಪೆಯ ಹರೀಶ್ವರ, ಹುಲಿಗೆರೆಯ ಸುರಂಗ, ನಿಜಗುಣಶಿವಯೋಗಿ ವೀರಭದ್ರ ಕವಿ ಮೊದಲಾದವರ ರಗಳೆ, ಚಂಪೂ, ತ್ರಿಪದಿ, ಷಟ್ಪದಿಗಳಲ್ಲಿ ಕಾವ್ಯಗಳನ್ನು ರಚಿಸಿದ್ದಾರೆ. 

	ಇವರಲ್ಲಿ ಮುಖ್ಯರಾದವರನ್ನು ಕುರಿತು ಪ್ರತ್ಯೇಕ ಲೇಖನಗಳನ್ನು ಕೊಡಲಾಗಿದೆ.
(ಕೆ.ಜಿ.ಕೆ.ಆರ್.:ವಿ.ಪಿಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ